ಕಿಲಿಮಾಂಜಾರೋ

ಟಾಂಗನ್ಯೀಕ ರಾಜ್ಯದಲ್ಲಿರುವ ಪರ್ವತಗುಚ್ಛ : ಜ್ವಾಲಾಮುಖಿಯಿಂದ ನಿರ್ಮಿತ. ಕೀನ್ಯದ ಸರಹದ್ದಿನ ವರೆಗೂ ಹಬ್ಬಿದೆ. 910ಮೀ ಎತ್ತರದ ಪ್ರಸ್ಥಭೂಮಿಯ ಮೇಲೆ ನಿಂತಿರುವ ಈ ಗುಚ್ಛದ ನಡುಶಿಖರದ ಹೆಸರು ಕೀಬೋ. ಇದರ ಎತ್ತರ 5866ಮೀ. ಇದು ಆಫ್ರಿಕದಲ್ಲೇ ಅತ್ಯುನ್ನತ ಶಿಖರ. ಕಿಲಿಮಾಂಜಾರೋ ಪರ್ವತಗುಚ್ಛ ಪೂರ್ವ-ಪಶ್ಚಿಮವಾಗಿ 81ಕಿ.ಮೀ. ಹಬ್ಬಿದೆ. ಇದರಲ್ಲಿರುವ ಮುಖ್ಯ ಜ್ವಾಲಾಮುಖಿಗಳು ಮೂರು : ಇವುಗಳಲ್ಲಿ ಕೀಬೋ ಇತ್ತೀಚಿನದು. ಷೀರಾ ಅತ್ಯಂತ ಹಳೆಯದು.

ಪ್ರಸ್ಥಭೂಮಿಯಿಂದ ನೋಡಿದರೆ ಕೀಬೋ ಶಿಖರವೊಂದು ಹಿಮಕವಚ ತೊಟ್ಟ ಗೋಪುರದಂತೆ ಕಾಣಿಸುತ್ತದೆ. ಕೀಬೋದ ಹೊರ ಬಾಯಿಯ ಅಗಲ 2.4ಕಿ.ಮೀ, ಆಳ 182ಮೀ. ಇದರೊಳಗಿರುವ ಶಂಕುವಿನಾಕಾರದ ಬೂದಿಯ ಗುಡ್ಡೆಯ ನಡುವೆ ಇರುವ ಬಾಯಿಯ ಅಗಲ 337ಮೀ. ಆಳ 121.33ಮೀ.

ಪೂರ್ವ ಆಫ್ರಿಕದ ಇತರ ಪರ್ವತಗಳಂತೆ ಕಿಲಿಮಾಂಜಾರೋದಲ್ಲೂ ಎತ್ತರಕ್ಕೆ ಅನುಗುಣವಾಗಿ ಖಚಿತವಾದ ಸಸ್ಯವಲಯಗಳನ್ನು ಗುರುತಿಸಬಹುದು. 1213ಮೀ - 1820ಮೀ ಎತ್ತರದ ದಕ್ಷಿಣ ಇಳಿಜಾರು ಪ್ರದೇಶದಲ್ಲಿ ಕಾಫಿ, ಬಾಳೆ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. 1820ಮೀ - 1000ಮೀ ಎತ್ತರದ ಪ್ರದೇಶ ದಟ್ಟ ಕಾಡುಗಳಿಂದ ತುಂಬಿದೆ. ಉತ್ತರ ಭಾಗದ ಅಷ್ಟೇ ಎತ್ತರದ ಪ್ರದೇಶದಲ್ಲಿ ಇವು ತೆಳ್ಳಗಾಗುತ್ತ ನಡೆದು ವಾಯುವ್ಯದ ಒಣ ವಾಯುಗಣ ಪ್ರದೇಶದಲ್ಲಿ ಅದೃಶ್ಯವಾಗುತ್ತವೆ. ಕಾಡು ಪ್ರದೇಶದ ಮೇಲ್ಭಾಗದಲ್ಲಿ, ಎಂದರೆ  4550ಮೀಗಿಂತ ಎತ್ತರದಲ್ಲಿ ಮಳೆಯ ಪರಿಮಾಣ ಕ್ರಮೇಣ ಕಡಿಮೆಯಾಗುತ್ತದೆ.

ಕಿಲಿಮಾಂಜಾರೋ ಪರ್ವತಾವಳಿಯ ಸುಮಾರು 1935 ಚ.ಕಿ.ಮೀ ಪ್ರದೇಶವನ್ನು ಅಭಯಾರಣ್ಯವಾಗಿ ಪರಿಗಣಿಸಲಾಗಿದೆ. ಆನೆ, ಖಡ್ಗಮೃಗ, ಕಾಡೆಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಇಲ್ಲಿ ವಾಸವಾಗಿವೆ.

ಪರ್ವತದ ದಕ್ಷಿಣದಲ್ಲಿರುವ ಮೋಷಿ ಎಂಬಲ್ಲಿಂದ ಕಿಲಿಮಾಂಜಾರೋ ಪರ್ವತದ ಆರೋಹಣ ಸುಲಭ. ಈ ಸ್ಥಳ ಮೊಂಬಾಸಾದಿಂದ ಪಶ್ಚಿಮಕ್ಕೆ 367ಕಿ.ಮೀ. ಮತ್ತು ಕೀನ್ಯದ ನೈರೋಬಿಯಿಂದ ದಕ್ಷಿಣಕ್ಕೆ 362ಮೀ. ದೂರದಲ್ಲಿದೆ. ಶಿಖರಾರೋಹಣಕ್ಕೆ ಆವಶ್ಯಕವಾದ ಸೌಲಭ್ಯ ಸಲಕರಣೆಗಳನ್ನು ಮೌಂಟ್ ಕ್ಲಬ್ ಆಫ್ ಈಸ್ಟ್ ಆಫ್ರಿಕ ಎಂಬ ಸಂಸ್ಥೆ ಒದಗಿಸುತ್ತದೆ. ಕೀಬೋ ಶಿಖರವನ್ನು ಹತ್ತುವುದು ಪ್ರಯಾಸಕರ; ಆದರೆ ಅದಕ್ಕೆ ಹೆಚ್ಚಿನ ಪ್ರಾವೀಣ್ಯ ಆವಶ್ಯಕವಿಲ್ಲ. ಮಾವೆನ್ಸಿಯನ್ನೇರಲು ಆರೋಹಣಾನುಭವ ಇರಲೇಬೇಕು. ಜೋಹಾನ್ಸ್ ರೆಬ್‍ಮನ್ ಮತ್ತು ಲುಡ್ವಿಗ್ ಕ್ರಾಫ್ ಎಂಬ ಜರ್ಮನ್ ಪಾದ್ರಿಗಳು 1848ರಲ್ಲಿ ಕಿಲಿಮಾಂಜಾರೋವನ್ನು ಕಂಡುಹಿಡಿದರು. ಹ್ಯಾನ್ಸ್ ಮೇಯರ್ ಮತ್ತು ಲುಡ್ವಿಗ್ ಪರ್ಟ್‍ಷೆಲರ್-ಇವರು 1889ರಲ್ಲೂ ಫ್ರಿಟ್ಸ್ ಜೇಗರ್ 1997ರಲ್ಲೂ ಕೀಬೋ ಶಿಖರವನ್ನೇರಿದರು. ಮಾವೆನ್ಸಿಯನ್ನು ಮೊತ್ತಮೊದಲಿಗೆ ಏರಿದಾತ ಫ್ರಿಟ್ಜ್ ಕ್ಲೂಟ್ (1912). ಈ ಪ್ರದೇಶವನ್ನು ಕುರಿತು ಅಧ್ಯಯನ ನಡೆಸಿದವರಲ್ಲಿ ಆರ್. ರ್ಯೂಷ್ (1927), ಜೆ. ಜೆ. ರಿಚರ್ಡ್ (1940) ಮತ್ತು ಪಿ. ಸಿ. ಸ್ಪಿಂಕ್ (1950) ಪ್ರಮುಖರು. 1950ರಲ್ಲಿ ಇದರ ಭೂಗರ್ಭ ಸಮೀಕ್ಷೆಯನ್ನು ಷೆಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧನ ತಂಡದವರು ಕೈಗೊಂಡಿದ್ದರು. ಇತ್ತೀಚೆಗೆ ಟಾಂಗನ್ಯೀಕದ ಭೂಗರ್ಭ ಸಮೀಕಣ ವಿಭಾಗ ಈ ಪ್ರದೇಶದ ಗಂಧಕ ನಿಕ್ಷೇಪವನ್ನು ಆರ್ಥಿಕವಾಗಿ ಬಳಸಿಕೊಳ್ಳುವುದರ ಬಗ್ಗೆ ಅಧ್ಯಯನ ನಡೆಸಿದೆ.

(ಆರ್.ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ